ಬುಧವಾರ, ಏಪ್ರಿಲ್ 6, 2011

ಬೆಳಕು

ಕೇಳಿದ ಪದಗಳಲ್ಲಿ

ಅರ್ಥ ಹುಡುಕದೆ

ಕೇಳದ ಸಾಲುಗಲ್ಲಿ

ಕನಸು ಕಾಣದ

ದೀಪ ಹಚ್ಚಿ

ಬೆಳಕು ಮಾತ್ರ ಸಾಕು.

-ಡಿಬಿಜಿ

ಜೀವ ಭಾವ

ಗೆಳೆಯ! ಗುಬ್ಬಚ್ಚಿ ಗೂಡಿನಲ್ಲಿ ನಮ್ಮ ಮಿಲನ

ಕುರಿಗೆಗೆ ಎಳಸಡ್ಡೆ ಕಟ್ಟಿ ಬಿತ್ತಿದ ನಿನ್ನ ಬೀಜ

ನನ್ನ ಹೊಲದಲ್ಲಿ ಹೆಣದಂತೆ ಮಲಗಿದ ಚೀಜ

ಎಕ್ಕಿ ಗಿಡದ ಅಜ್ಜ ಹಾರಿ ಬಂದು ಭುವಿಯಲ್ಲಿ ಸಂದ ಸಂಮೀಲನ.

ಕಾಯುತ್ತಿದ್ದೇನೆ ಚೈತ್ರ ಮಾಸದ ವಸಂತನ ಅಶ್ವಿನಿ ಮಳೆ

ನನ್ನ ನೆಲ ತೋಯ್ದು ಹೊಲ ನೆನೆದು ಮಲಗಿದ ಕಾಯ

ಮೊಳಕೆಯೊಡೆದು ಭುವಿ ಗರ್ಬವ ಸೀಳಿದ ಜಗದ ಮಾಯ

ಮರೆದುದು ಮರವಾದರೆ ಅಳವೆಲ್ಲ ಬೇರುಗಳ ವೈತ್ರದ ಕಲೆ.

ರೂಪಾಗ್ನಿಯಲಿ ರೂಹಿದ ಮೋಹದ ಇಳೆಯ ಬೆಳೆ

ಜೀವಕಳೆ ತುಂಬಿ ಕಣ್ಣ ಸೆಳೆಯುವ ಚುಂಬಕ ಮಾಟ

ಪ್ರೇಮಾಮೃತದ ಪೋಷಣೆ ಕರಳು ಬಳ್ಳಿಯ ಕಳ್ಳಿನಾಟ

ಸೌಂದರ್ಯಕ್ಕೆ ಪ್ರೇಮವೇ ಸಾಕ್ಷಿಕರಿಸಿದ ಪರಮಾತ್ಮದ ಹೊಳೆ.

ನನ್ನ ಕೋಶದಲ್ಲಿ ನಿನ್ನ ಜೀವಕೋಶದ ಜೀವ

ನಿತ್ಯ ನೂತನ ಪಾಡಾಗಿ ಹಾಡಲಿ ನವರಸದ ಭಾವ.


- ಡಾ. ಡಿ. ಬಿ. ಗವಾನಿ.

ನಿನ್ನ ನೋಡಿದಾಗ

ನಿನ್ನ ನೋಡಿದಾಗ

ಅದೆಲ್ಲಿಂದಲೋ ಅರಿಯದ

ಹೃದಯದ ಕೋಣೆಯಿಂದ

ಉಕ್ಕಿ ಬರುವುದು

ಪ್ರೀತಿ - ಮಮತೆ.

ನೀ ನನ್ನ ಕಂಡಾಗ

ಹಳೆಯ ಕಾಲದ

ರಮ್ಯ ಕಥಾನಾಯಕನಂತೆ

ನನ್ನಡೆಗೆ ಓಡಿಬಂದಾಗ

ನನಗನ್ನಿಸುವುದು

ಇದು ಈ ಜನ್ಮದ

ಬೆಸುಗೆಯೆಲ್ಲ

ಜನ್ಮಜನ್ಮಾಂತರದ

ಬೆಸುಗೆ.

ನಿನಗೆ ಗೊತ್ತೇನು?

ನಿನ್ನ ಕಂಡಾಗ

ನನ್ನಲ್ಲಿ ಉಕ್ಕಿ ಹರಿಯುವ

ಪ್ರೀತಿ - ಮಮತೆ

ಜಗತ್ತಿನ ಯಾವ

ನಾಯಿಮರಿ ಕಂಡಾಗಲೂ

ಉಕ್ಕಿಹರಿದಿರಲಿಲ್ಲ

ಹೃದಯ ಪುಲಕಿತಗೊಂಡು

ನಕ್ಕು ನಲದಿರಲಿಲ್ಲ.

- ಅಕ್ಷತಾ. ಕೆ.

ಬಯಕೆ

ಬಯಕೆ ಎಂಬುದು

ಅದ್ಯಾವ ಹಕ್ಕಿ

ಹೆಸರೇನೋ?

ತಾನು ಬಯಸಿದ

ತಾಣ ಸಿಕ್ಕರೂ

ನೆಮ್ಮದಿ ಇಲ್ಲ.

ಮತ್ತೇ ಅದಮ್ಯವಾದ

ಅನುಭವ ಪಡೆಯಲು

ಅರಸುತ್ತಲೇ ಇರುತ್ತದೆ

ಅಗಸವೆಲ್ಲ

ಹಗಲಿರಳು ಲೆಕ್ಕಿಸದೆ.

ಒಮ್ಮೆ ಬೇರೊಬ್ಬರಿಗೆ

ಪರಿತಪಿಸಿ

ಇನ್ನೊಮ್ಮೆ ತನಗಾಗಿ

ತಾನೇ ಪರಿತಪಿಸಿ

ಕೊರಗುತ್ತದೆ

ಹಗಲಿರಳು ಲೆಕ್ಕಿಸದೆ.

ಅನಂತ ಆಕಾಶದಲಿ

ತನ್ನ ಅನಂತ ಬಯಕೆ

ಈಡೇರಿಸಿಕೊಳ್ಳಲು

ನಡೆಸಿರುತ್ತದೆ ಸತತ

ಅನೂಹ್ಯ ಪ್ರಯತ್ನ

ಹಗಲಿರಳು ಲೆಕ್ಕಿಸದೆ.

- ಅಕ್ಷತಾ. ಕೆ.

ಗಗನಕುಸುಮಗಳು

ಆಗ ತಾನೇ ಅರಳಿದ ಮಲ್ಲಿಗೆ

ಮೆಲ್ಲಗೆ ಸುವಾಸನೆ ಬೀರಿ ಪರಿಸರ

ಮುದಗೊಳಿಸಿ ಹದವಾಗಿ ಹೀಚಾಗಿ

ಕಾಯಾಗಿ ಗಟ್ಟಿಗೊಂಡು ಹಣ್ಣಾಗಿ

ನೆಲಕ್ಕೆ ಬೀಳುವ ಸಮಯ

ಪಾರಿವಾಳಕ್ಕೆ ಚಂಗನೆ ಹಾರಿ

ಬಾಹ್ಯಾಕಾಶದಲ್ಲಿ ತೆಲಬೇಕಂದರೆ

ಅದರ ರೆಕ್ಕೆಗಳು ಕಾಲ

ಹಿಂದೆ ಕತ್ತರಿಸಿ ನಡೆಯಲು

ಬಾರದಂತೆ ಹಿಂಸಿಸಿ ಮನದ

ಮುಂದೆ ಧ್ಯಾನಸ್ಥ ಪರಿಧಿಯಲಿ

ಇಲಿಯಡ್ ಮಹಾಕಾವ್ಯ

ರಾಮಯನದಂತೆ ಸೀತೆಗೂ

ವನವಾಸ ನೌಸಿಕಾಗೆ ಬರಿ ಸಿಡಿಲು

ಬಡಿದು ಸಂಜೆ ಹೊತ್ತಿಗಾಗಿ ಕಾಯ್ದು

ಮುಗಿಲು ಚಿತ್ತಾರ ಬಿಡಿಸಿದಾಗ

ಮಲ್ಲಿಗೆಗಳೆಲ್ಲ ನಕ್ಷತ್ರದಂತೆ

ನೆಲದ ಮೇಲೆ ಹಾಯಾಗಿ

ಹೊಳೆಯುತ್ತವೆ ಗಗನಕುಸುಮಗಳು.

- ಡಾ. ಡಿ. ಬಿ. ಗವಾನಿ